ಕಾವೇರಿ-ಕೊಡವರ ಅವಿನಾಭಾವ ಸಂಬಂಧ
ವೇದಕಾಲದಲ್ಲಿ ಮರುದ್ವೈದೆ ಎಂದು ಪ್ರಸಿದ್ಧಳಾಗಿದ್ದ ಕಾವೇರಿಯ ಮಧ್ಯಭಾಗವು ಶ್ರೀಮನ್ನಾರಾಯಣನ ಶಯನ ಸ್ಥಾನವಾಗಿದೆ. ಮೂಲಭಾಗ ಅಥವಾ ತಲೆಯ ಭಾಗವು ಬ್ರಹ್ಮನಿಂದ ಆಶ್ರಿತವಾಗಿದೆ. ಕಾವೇರಿ ಹರಿಯುವ ದಂಡೆಗಳು ಶಿವಲಿಂಗಗಳಿಂದ ಆವೃತವಾಗಿದೆ. ತೀರ್ಥಸ್ವರೂಪಿಣಿಯಾದ ಕಾವೇರಿಯೇ ಕೊಡವರ ಕುಲದೇವತೆ. ತಾಯಿಯ ಜಲರೂಪವನ್ನು ತೀರ್ಥರೂಪಿಣಿಯಾಗಿಯೇ ಕೊಡವರು ಇಂದಿಗೂ ಆರಾಧಿಸುತ್ತಾ ಬಂದಿರುತ್ತಾರೆ.
ಜೀವಜಲ
ಈ ಸೃಷ್ಠಿಯಲ್ಲಿ ಈ ಭೂದೇವಿಯ ಒಡಲಿನಲ್ಲಿ ಜಲವಿಲ್ಲವೆಂದರೆ ಜೀವಿಗಳು ಉಳಿಯಲು ಸಾಧ್ಯವೇ? ಈ ಭೂಮಿಯಷ್ಟೇ ಮುಖ್ಯ ಜೀವಜಲವೆಂಬ ಜ್ಞಾನ ಕೊಡವ ಹಿರಿಯರಿಗೆ ಇದ್ದುದರಿಂದಲೇ ತೀರ್ಥರೂಪಿಣಿಯಾದ ಕಾವೇರಿಗೆ ಇಂದಿಗೂ ಕೊಡವರು ತಲೆಬಾಗುವರು. ಮುಂಜಾನೆ ಕೊಡವತಿಯರು ಎದ್ದು ಶುಚಿಭರ್ೂತರಾಗಿ "ನೆಲ್ಲಕ್ಕಿ ಬೊಳ್ಚ" (ನಡುಮನೆ ದೀಪ) ಹಚ್ಚಿ ಕೂವ(ಬಾವಿ)ಕ್ಕೆ ಹೋಗಿ ಹೊಸ ನೀರು ತರುತ್ತಾರೆ. ಮೊದಲಿಗೆ ಬಂದು ಚೆಂಬು ನೀರನ್ನು ಮನೆಯ ಸಿಂಹಾದ್ವಾರದ ಎಡಭಾಗದಲ್ಲಿ ಇಡುವರು. ಮನೆಗೆ ಬರುವ ನೆಂಟರಿಸ್ಟರು ಆ ಚೊಂಬಲ್ಲಿರುವ ನೀರನ್ನು ಕೈಯಲ್ಲಿ ಮುಟ್ಟಿಯೇ ಒಳಕ್ಕೆ ಕಾಲಿಡಬೇಕೆಂದು ಪದ್ಧತಿ ಕೊಡವರಲ್ಲಿ ಇಂದಿಗೂ ಇದೆ. ಅಂದರೆ, ಮನೆಯ ಮುಂದೆ ನಿತ್ಯವೂ ಇಟ್ಟಿರುವ ಚೆಂಬಿನ ಜಲದಲ್ಲಿ ಕಾವೇರಿ ತಾಯಿಯನ್ನು ಕಾಣುವರು ಕೊಡವರು. ಒಳಗೆ ಬರುವ ನೆಂಟರಿಸ್ಟರು ಕಾವೇರಿ ತಾಯಿಯನ್ನು ಪ್ರಾಥರ್ಿಸಿ, ಕೆಟ್ಟ ಮನಸ್ಸನ್ನು ಬಿಟ್ಟು ಒಳ್ಳೆಯ ಮನಸ್ಸಿನಿಂದ ಮನೆಯೊಳಗೆ ಕಾಲಿಡಬೇಕೆಂಬ ಆಶಯವಿದೆ. ಮನೆಗೆ ಬಂದ ನೆಂಟರಿಸ್ಟರನ್ನು ಚೆಂಬಿನಲ್ಲಿ ನೀರು ಹಿಡಿದು "ಬಂದಿರಾ" ಎಂದು ಮನೆಯೊಡತಿ ಆಹ್ವಾನಿಸುತ್ತಾಳೆ. ಗಂಡು ತಾನು ಮದುವೆಯಾಗಲು ವಧುವನ್ನು ನೋಡಲು ಹೋದಾಗ "ಇಂದ್ ನೀರ್ ಬೆಚ್ಚೋಲೆ ಎಂದೂ ನೀರ್ ಬೆಪ್ಪೇಂಗಿ, ಬೆಚ್ಚ ನೀರೆಡ್ಪಿನೋ, ಮೇಲೆ ನೀರ್ ಕೇಪಿನೋ" ಇವತ್ತು ನೀರು ಇದ್ದಂತೆ ನನಗೆ ದಿನನಿತ್ಯವೂ ನೀನು ನೀರು ಇಡುವುದಾದರೆ ನೀನಿಟ್ಟ ನೀರನ್ನು ತೆಗೆದುಕೊಳ್ಳುತ್ತೇನೆ. ಇನ್ನೂ ಹೆಚ್ಚಿಗೆ ನೀರನ್ನು ಕೇಳುತ್ತೇನೆ ಎಂದು ವರ ಹೇಳಿದರೆ, "ಉಯಿ ಅಂದರೆ ಬೆಂದುವೇ, ಇಂದ್ ಬಂದ ನಿಂಗಳೋ, ಎಂದೂ ನಿಂಗ ಬಂದಿನೊ, ಎಂದೂ ನೀರ್ ಬೆಪ್ಪಿನೋ" ಅಯ್ಯೋ ಹಾಗಾದರೆ ಬಂಧುವೆ ಇವತ್ತು ಬಂದ ಹಾಗೆ ನಿತ್ಯವೂ ನೀವು ಬರುವುದಾದರೆ, ನಿತ್ಯವು ನಾನು ನಿಮಗೆ ನೀರಿಡುತ್ತೇನೆ ಅನ್ನುತ್ತಾಳೆ ಆಕೆ.
ಮದುವೆ ಮುಹೂರ್ತ ಕಳೆದು ಗಂಡನ ಮನೆಗೆ ಬಂದ ವಧುವನ್ನು ಮೊದಲಿಗೆ ಭೂದೇವಿಗೆ ಗೊಬ್ಬರ ಹಾಕಲು ಮುತೈದೆಯರೊಡನೆ ಕಳಿಸುತ್ತಾರೆ. ಗೊಬ್ಬರ ಹಾಕಿ ಬರುವಾಗ ಮುತೈದೆಯರೊಡಗೂಡಿ ಪವಿತ್ರವಾದ ಜಲವನ್ನು ಪೂಜಿಸಿ, ವಂದಿಸಿ, ತೀರ್ಥರೂಪಿಣಿಯಾದ ಕಾವೇರಿಯನ್ನು ತಾನು ಏರಿದ ಮನೆಗೆ ತರುವುದೇ ಮೊದಲ ಶಾಸ್ತ್ರವಾಗಿದೆ. ಇದನ್ನು "ನೀರ್ ಚಾಣ ಕಯಿಪೊ" ಎನ್ನುತ್ತಾರೆ. ಕೊಡವರ ಮದುವೆ ಮೊದಲಾದ ಸಮಾರಂಭಗಳಲ್ಲೂ ಮನೆಯೊಡತಿ ಚೆಂಬಿನಲ್ಲಿ ನೀರು ಹಿಡಿದು ಊಟಕ್ಕೆ ಏಳಿರಿ ಎಂದು ಬಂದವರನ್ನು ಸತ್ಕರಿಸುತ್ತಾಳೆ.
ಕೊಡವತಿಯರ ವಿಶಿಷ್ಟವಾದ ಸೀರೆಯಲ್ಲೂ ಇದ್ದಾಳೆ ಕಾವೇರಿ...! ಪಾರ್ವತಿ ಭಕ್ತರಾದ ಚಂದ್ರವಂಶಸ್ಥರೂ, ಸತ್ಯವಂತರೂ, ನಿಷ್ಟಾವಂತರೂ ಆದ ಕೊಡವರಿಗೆ ಕಾವೇರಿ ಮಾತೆ ಆಗಸ್ತ್ಯಋಷಿಯ ಕಮಂಡಲುವಿನಿಂದ ಹೊರಬರುವ ಏಳು ದಿನಗಳಿಗೆ ಮುಂಚಿತವಾಗಿಯೇ ಕಾವೇರಿ ತಾಯಿಯ ಸ್ವಪ್ನ ದರ್ಶನವಿತ್ತು ತುಲಾ ಸಂಕ್ರಮಣ ಕಾಲದಲ್ಲಿ ವಲಂಬುರಿ(ಇಂದಿನ ಬಲಮುರಿ) ಕೊಡವರಿಗೆ ಕಾವೇರಿಯನ್ನು ಕಾಯಲು ಹೇಳುತ್ತಾಳೆ. ಪಾರ್ವತಿ ದೇವಿಯ ಆಜ್ಞೆಯಂತೆ ಕೊಡವ-ಕೊಡವತಿಯರು, ಮಕ್ಕಳೊಂದಿಗೆ ಅತ್ಯಂತ ಕೋಲಾಹಲದಿಂದ 18 ತರಹದ ವಾದ್ಯಗೋಷ್ಠಿಯೊಂದಿಗೆ ಬಲಮುರಿಗೆ ಹೋಗಿ ಕಾಯುತ್ತಿರುವರು. ತೀರ್ಥರೂಪಿಣಿಯಾದ ಕಾವೇರಿಯ ರಭಸಕ್ಕೆ (ಕಾವೇರಿಯನ್ನು) ಕಾಯುತ್ತಿದ್ದ ಕೊಡವತಿಯರ ಸೀರೆಯ ನೆರಿಗೆಗಳು ಹಿಂದಕ್ಕೆ ತಿರುಗಿದರೂ, ಲೆಕ್ಕಿಸದೆ ಅಲ್ಲೇ ಕಾವೇರಿತಾಯಿಯ ಧ್ಯಾನದಲ್ಲಿ ಮೈಮರೆತ ಕೊಡವತಿಯರಿಗೆ ಕಾವೇರಿ ತಾಯಿಯು ಆಶರ್ೀವಾದಿಸಿ ವರ ನೀಡುತ್ತಾಳೆ. "ಇಂದು ನನ್ನ ರಭಸಕ್ಕೆ ತಿರುಗಿದ ಸೀರೆಯ ನೆರಿಗೆ ನನ್ನ ಮಕ್ಕಳೆಂಬ ಗುರುತಿಗಾಗಿ ಹಾಗೆಯೇ ಇರಲಿ. ಮುಂದೆ ಇಟ್ಟ ನೆರಿಗೆಯನ್ನು ಹಿಂದಕ್ಕೂ, ಹಿಂದೆ ಬಿಟ್ಟ ಸೆರಗನ್ನು ಮುಂದಕ್ಕೆ ಕಟ್ಟಿಕೊಳ್ಳಿ" ಎಂದು ಹೇಳಿ ತಾನೂ ಎಡದಿಂದ ಬಲಕ್ಕೆ ಬಹು ವಿಸ್ತಾರವಾಗಿ ಸುತ್ತಿಕೊಂಡು ಹೊರಟಳೆಂಬುದು ಇತಿಹಾಸದಲ್ಲಿ ದಾಖಲಿಸಲ್ಪಟ್ಟಿದೆ. ಇದರ ಸೂಚಕವೆಂಬಂತೆ ಎಡದಿಂದ ಬಲಕ್ಕೆ ನೀರಿನ ಸುಳಿರೂಪದಲ್ಲಿ ಕಾವೇರಿಯ ತಾಯಿಯ ಪ್ರದಕ್ಷಿಣೆಯನ್ನು ಇಂದಿಗೂ ನಾವು ಬಲಮುರಿಯ ಸೇತುವೆಯ ಕೆಳಭಾಗದಲ್ಲಿ ಕಾಣಬಹುದು.
ಕೊಡವರ ಸಾಂಪ್ರಾದಾಯಿಕ ಆಭರಣವಾದ ಕೊಕ್ಕೆತಾತಿಯಲ್ಲೂ ಇದ್ದಾಳೆ ಕೊಡವರ ಕುಲದೇವತೆಯಾದ ಕಾವೇರಿ. ವೇದಕಾಲಗಳಲ್ಲಿ ಜಲ (ನೀರನ್ನು)ಅರ್ಧಚಂದ್ರಾಕಾರದ ರೇಖಾಚಿತ್ರಗಳಲ್ಲಿ ಸೂಚಿಸುತ್ತಿದ್ದರು. ಅದುದ್ದರಿಂದಲೇ ಜಲರೂಪದ ಕಾವೇರಿಯನ್ನು ಕೊಕ್ಕೆತಾತಿಯ ರೂಪದಲ್ಲಿ ಎಲ್ಲಾ ಶುಭಾಶುಭ ಕಾರ್ಯಗಳಲ್ಲೂ ಕೊಡವ-ಕೊಡವತಿಯರು ಯಾವ ಬೇಧವಿಲ್ಲದೆ ಧರಿಸುತ್ತಾರೆ. ಕೊಡವರ ಪೀಚೆಕತ್ತಿಯಲ್ಲೂ ಸೂರ್ಯ, ಚಂದ್ರರ ಚಿತ್ರವಿರುತ್ತದೆ. ಬಹಳ ಹಿಂದೆ ಕೊಡವತಿಯರೂ ಪೀಚೆಕತ್ತಿ ಧರಿಸುತ್ತಿದ್ದರಂತೆ. "ಕೊಡವ ಪೊಡಿಯ" ಕೊಡವತಿ ಸೀರೆ ಉಟ್ಟ ನಂತರ ಅವರ ಬಲದ ಬದಿಯಲ್ಲಿ ಪೀಚೆಕತ್ತಿ ಇಡಲು ಸ್ಥಳಾವಕಾಶ ಇದೆ. ತಮ್ಮ ಹಿರಿಯರು ಪೀಚೆಕತ್ತಿ ಧರಿಸುತ್ತಿದ್ದರೆಂಬ ಇತಿಹಾಸದ ಸೂಚಕವೆಂಬಂತೆ ಇಂದಿಗೂ ಕೊಡವತಿಯರು ಆಗಾಗ ತಮ್ಮ ಸೆರಗು ಸರಿಪಡಿಸಿಕೊಳ್ಳುವ ನೆಪದಲ್ಲಿ ಪೀಚೆಕತ್ತಿ ಇದೆಯೇ ಎಂದು ನೋಡಿಕೊಳ್ಳುವುದನ್ನು ನೀವು ಸಭೆ ಸಮಾರಂಭಗಳಲ್ಲಿ ನೋಡಿರಲೂಬಹುದು...!
ಕೊಡವರು "ನೆಲ್ಲಕ್ಕಿ ಬೊಳಚ" (ನಡುಮನೆ ದೀಪ)ಕ್ಕೆ ಅಕ್ಷತೆ ಹಾಕಿ ಕಾವೇರಿ ಮಾತೆಯನ್ನು ಪ್ರಾಥರ್ಿಸಿಯೇ ತಮ್ಮ ಎಲ್ಲಾ ಶುಭಾಶುಭ ಕಾರ್ಯಗಳಿಗೆ ತೊಡಗುವರು.
ಹಿಂದಿನ ಕಾಲದಲ್ಲಿ ಏನಾದರೂ ತಪ್ಪು ಮಾಡಿ ಆ ಕೊಡವ ಶಿಕ್ಷೆಗೆ ಒಳಗಾಗಿದ್ದರೆ, ಶಿಕ್ಷೆ ಮುಗಿದ ಮೇಲೆ ಅವನು ಕಾವೇರಿಗೆ ಹೋಗಿ ಪುಣ್ಯಸ್ನಾನ ಮಾಡಿ ಬರಬೇಕಿತ್ತು. ಕಾವೇರಿ ಸ್ನಾನ ಮಾಡಿ ಮೇಲೆ ಶಿಕ್ಷೆಗೊಳಗಾದವನನ್ನು ಎಲ್ಲರೂ ಎಂದಿನಂತೆ ಸ್ವೀಕರಿಸುತ್ತಿದ್ದರು. ಹೀಗೆ ತಪ್ಪು ಮಾಡಿದವರನ್ನು ಇಂತಿಷ್ಟು ದಿನ "ಪರಂಬಡಿ ಬೆಪ್ಪ" (ಊರಿನಿಂದ ಪ್ರತ್ಯೇಕವಾಗಿರಿಸುವ) ಪದ್ಧತಿ ಇತ್ತು.
ಕುಟುಂಬದ ಹಿರಿಯರು ಕೊನೆ ಉಸಿರೆಳೆಯುವ ಸಂದರ್ಭದಲ್ಲಿ ಕಾವೇರಿ ತೀರ್ಥವನ್ನು ಚಿನ್ನದ ಚಿಕ್ಕ ತುಣುಕಿನೊಂದಿಗೆ ಬಾಯಿಗೆ ಹಾಕುವುದು ಕೊಡವರ ಪದ್ಧತಿಯಾಗಿದೆ. ಜೊತೆಗೆ ತೆಂಗಿನಕಾಯಿ ಒಡೆದು ಆ ನೀರನ್ನು ಬಾಯಿಗೆ ಹಾಕುತ್ತಾರೆ.
ಹೆಣ್ಣು ಮಕ್ಕಳು ಬಾಣಂತನ ಮುಗಿಸಿ ತವರು ಮನೆಯಿಂದ ತನ್ನ ಗಂಡನ ಮನೆಗೆ ಹೋಗುವಾಗ ಜಲರೂಪಿಣಿಯಾದ ಕಾವೇರಿಯನ್ನು ತನ್ನ ತವರು ಮನೆಯ ಕೊವ(ಬಾವಿ)ದಲ್ಲಿ ಪ್ರಾಥರ್ಿಸಿ, ಆರಾಧಿಸಿ ತೀರ್ಥರೂಪಿಣಿಯಾದ ಕಾವೇರಿಯನ್ನು ಮನೆಗೆ ತಲೆಯಲ್ಲಿ ಹೊತ್ತು ತಂದ ನಂತರವೇ ಬಾಣಂತಿಯು ತನ್ನ ಮಗುವಿನೊಡನೆ ಗಂಡನ ಮನೆಗೆ ತೆರಳುವುದು ವಾಡಿಕೆ.
ಸಹ್ಯಾದ್ರಿಯಲ್ಲಿ ಉದಿಸಿ ವೇದ ಕಾಲದಲ್ಲಿ ಮರುದ್ವೈದೆ ಎಂದು ಪ್ರತೀತವಾದ ಕಾವೇರಿ ತಾಯಿಯ ಅನೇಕ ಶ್ಲೋಕಗಳಲ್ಲಿ ಉಕ್ತವಾಗಿದ್ದಾಳೆ. ಕಾವೇರಿ ಮಹಿಮೆಯು ವಾಲ್ಮೀಕಿ ರಾಮಾಯಣದಲ್ಲೂ, ವ್ಯಾಸಭಾರತದಲ್ಲೂ ಉಕ್ತವಾಗಿದೆ. ಕಾವೇರಿಯು ಗಂಗೆಗಿಂತ ಹಿರಿಯಳು! ಹಿಮಾಲಯ ಅರಬ್ಬೀ ಸಮುದ್ರಗಳಿಲ್ಲದ ಕಾಲದಲ್ಲೇ ಕಾವೇರಿಯು ಇದ್ದಳು. ಕಾವೇರಿಯು ಆಫ್ರಿಕಾದ ಮಡಗಾಸ್ಕರ್ತನಕ ಹರಿಯುತ್ತಿದ್ದಳು ಎಂಬ ಇತಿಹಾಸದ ಸೂಚಕವೇ ನಮ್ಮ ಕುಂದತ್ ಬೊಟ್ಟ್ ಹಬ್ಬ. ಆಫ್ರಿಕಾದಲ್ಲಿ ಇಂದಿಗೂ ಮಹಾಜಂಘಾ ಎಂಬ ನೆಲೆ-ಕೊಡಗಿನ ಮಹಾಂತೋಡ್ನ ಹೆಸರು. ಮಾನವ ವಿಕಾಸವು ಆಫ್ರಿಕಾದಲ್ಲಿ ಮಾತ್ರವಲ್ಲ ಏಷ್ಯಾ ಖಂಡದಲ್ಲೂ ಮಾನವ ವಿಕಾಸವಾಗಿದೆ ಎಂದು ಲಂಡನ್, ಸ್ವೀಡನ್ನ ಕೆಲವು ವಿಶ್ವವಿದ್ಯಾನಿಲಯಗಳು ಅಭಿಪ್ರಾಯ ಪಟ್ಟಿದೆ. ಅಂದರೆ ಸ್ಕಂದಪುರಾಣದಲ್ಲಿ ಉಲ್ಲೇಖವಾಗಿರುವಂತೆ ಕೊಡವರು ಕಾವೇರಿ ಹುಟ್ಟುವ ಮೊದಲೇ ಕೊಡಗಿನಲ್ಲಿದ್ದರೆಂಬುದು. ಬರೀ ಪುರಾಣದ ಕಟ್ಟು ಕಥೆಯಲ್ಲ. ಅದು ಇತಿಹಾಸವೆಂಬುದು ನಾವಿಲ್ಲಿ ತಿಳಿಯಬಹುದು.
ಕೊಡವರು ತಮ್ಮ ಕುಲದೇವಿಯಾದ ಕಾವೇರಿಯಮ್ಮೆಯನ್ನು ಭಕ್ತಿಯಿಂದ ನೆನೆಸಿಕೊಂಡು ಅವಳನ್ನು ನಂಬಿ ಬದುಕಿದರೆ ಒಳಿತಾಗುವುದೆಂಬ ವರವೂ ಕೊಡವರಿಗಿದೆ ಎಂಬ ಪ್ರತೀತಿ ಇದೆ. ಹೀಗೆ ಕೊಡವರ ಕುಲದೇವತೆಯಾದ ಕಾವೇರಿಯ ಅವಿನಾಭಾವ ಸಂಬಂಧವನ್ನು ತೆರೆದಷ್ಟು ಬಿಚ್ಚಿಕೊಳ್ಳುತ್ತದೆ. ಆ ಪವಿತ್ರವಾದ ಸಂಬಂಧವನ್ನು ಬರೆದು ವಣರ್ಿಸಿ ಮುಗಿಸಲು ಸಾಧ್ಯವೇ?
ಚಂದ್ರಾರ್ಕರಿರುವ ತನಕ ಈ ಭೂಮಿಯಲ್ಲಿ ಕಾವೇರಿಯು ಸ್ಥಿರವಾಗಿರಲಿ... ಆಕೆಗೆ ಜಯವಾಗಲಿ... ಆಕೆಯ ನಾಮ ಸ್ಮರಣೆಯು ಎಲ್ಲರ ನಾಲಿಗೆಯಿಂದ ಮೊಳಗಲಿ ಎನ್ನುತ್ತಾ....
ಲೇಖನ: ಕರೋಟಿರ ಶಶಿ ಸುಬ್ರಮಣಿ
------------------
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ